ರಂಗಕಲಾವಿದ ಮೇಘ ಸಮೀರ

ಇಂದು ನಮ್ಮೊಂದಿಗೆ ಇರುವವರು ಖ್ಯಾತ ರಂಗಕಲಾವಿದರಾದ ಮೇಘ ಸಮೀರ. ಇವರು ಸತತವಾಗಿ ೨೪ ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತಿದ್ದಾರೆ. ಇಂದಿನ ಸಿನೆಮಾ ಜಗತ್ತಿನಲ್ಲಿಯೂ ಸಹ, ರಂಗಭೂಮಿ ಜಗತ್ತನ್ನು ಬೆಳೆಸುವಲ್ಲಿ ಸಾಕಷ್ಟು ಕೆಲಸ ಮಾಡುವ ಜನರಿದ್ದಾರೆ. ಅವರಲ್ಲಿ ಮೇಘ ಸಮೀರ ಕೂಡ ಒಬ್ಬರು. ಮೇಘ ಸಮೀರರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.


ನಿಮ್ಮ ಪರಿಚಯ ಮಾಡಿಕೊಡಿ.


ನನ್ನ ಹೆಸರು ಮೇಘ ಸಮೀರ. ನಾನು ಕುಂದಾಪುರದವನು. ಈಗ ನಾನು ಮೈಸೂರಿನ ನಟನಾ ರಂಗಶಾಲೆಯಲ್ಲಿ ರಂಗ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ.. ಕಳೆದ 24 ವರ್ಷಗಳಿಂದ ಇದೇ ರಂಗದಲ್ಲಿ ನಟನೆ, ನಿರ್ದೇಶನ, ಶಿಕ್ಷಕ, ಸಂಗೀತಗಾರ, ತಂತ್ರಜ್ಞ ಮುಂತಾದ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದ್ದೇನೆ.


ನಟನೆಯಲ್ಲಿ ನಿಮ್ಮ ಆಸಕ್ತಿ ಮೂಡಿದ್ದು ಹೇಗೆ?


ಎರಡು ಕಾರಣಗಳಿವೆ:

ಮೊದಲನೆಯದು ನನ್ನ ತಂದೆ ಜಿ ವಿ ಕಾರಂತ ಅವರು ಕುಂದಾಪುರದ ಸಮುದಾಯ ಸಾಂಸ್ಕೃತಿಕ ಸಂಘಟನೆಯಲ್ಲಿ ಕಾರ್ಯದರ್ಶಿಯಾಗಿದ್ದು, ಅವರಿಗೆ ರಂಗಭೂಮಿಯಲ್ಲಿ ತುಂಬಾ ಆಸಕ್ತಿ ಇತ್ತು. ಸಮುದಾಯದ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಇದರಿಂದಾಗಿ ನನಗೆ ಬಾಲ್ಯದಿಂದಲೇ ಆಧುನಿಕ ರಂಗಭೂಮಿಯ ಪರಿಚಯವಿದ್ದು ಇದೇ ವಾತಾವರಣದಲ್ಲಿ ಬೆಳೆದ ನಾನು ರಂಗಭೂಮಿಗೆ ನನ್ನನ್ನು ತೊಡಗಿಸಿಕೊಳ್ಳುತ್ತಾ ಬೆಳೆದೆ.

ಎರಡನೆಯದು ಕುಂದಾಪುರ ಸಾಂಸ್ಕೃತಿಕ ಕಲೆಗಳ ವೈವಿಧ್ಯತೆಗೆ ಹೆಸರುವಾಸಿಯಾಗಿದ್ದು, ಬಾಲ್ಯದಿಂದಲೇ ಈ ಕಲೆಗಳಿಂದ ಪ್ರಭಾವಿತನಾಗಿ ಅವುಗಳಲ್ಲಿ ಭಾಗವಹಿಸುತ್ತಾ ಬೆಳೆದೆ.


ರಂಗಭೂಮಿಯಲ್ಲಿ ನಿಮ್ಮ ಮೊದಲನೆಯ ಅನುಭವ ಹೇಗಿತ್ತು?


1996ರಲ್ಲಿ ಶ್ರೀ ಪಾದ ಭಟ್ಟರ ನೇತೃತ್ವದಲ್ಲಿ ನಡೆದ 20 ದಿನಗಳ ಕಾರ್ಯಾಗಾರದಲ್ಲಿ ಗುರುದಕ್ಷಿಣೆ ಎಂಬ ನಾಟಕದಲ್ಲಿ ಮಂಗನ ಪಾತ್ರ ವಹಿಸಬೇಕಾಗಿ ಬಂತು ಇದೇ ನನ್ನ ರಂಗಪ್ರವೇಶದ ಮೊದಲನ


ವೃತ್ತಿಪರ ನಾಟಕಗಳನ್ನು ಅಭಿನಯಿಸಲು ಪ್ರಾರಂಭಿಸಿದ್ದು ಯಾವಾಗ ಮತ್ತು ಅದರ ಮೊದಲ ಅನುಭವವನ್ನು ತಿಳಿಸಿ?


ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ರಂಗಭೂಮಿ ನಾಟಕಗಳ ಕಡೆ ಸೆಳೆತ ಹೆಚ್ಚಾಯಿತು. ನಂತರ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ರಂಗ ಅಧ್ಯಯನ ಕೇಂದ್ರದ ನಿರ್ದೇಶಕರಾದ ಜೀವನ್ ರಾಮ್ ಸುಳ್ಯರವರ ಮಾರ್ಗದರ್ಶನದಲ್ಲಿ ಶಿಸ್ತುಬದ್ಧವಾದ ರಂಗಭೂಮಿಯನ್ನು ಅಭ್ಯಾಸ ಮಾಡಲು ಅವಕಾಶ ದೊರೆಯಿತು. ನಂತರ ಮೈಸೂರಿನಲ್ಲಿ ಆಂಗ್ಲ ಸ್ನಾತಕೋತ್ತರ ಪದವಿ ಮಾಡುತ್ತಿರುವಾಗ ಮಂಡ್ಯ ರಮೇಶ್ ಅವರು ಒಂದು ನಾಟಕದ ನಟನ ಗೈರುಹಾಜರಿಯಲ್ಲಿ ಆ ಪಾತ್ರವನ್ನು ನಿರ್ವಹಿಸಲು ಅವಕಾಶವನ್ನು ಮಾಡಿಕೊಟ್ಟರು. ಮೈಸೂರಲ್ಲಿ ಇದ್ದಂತಹ ನಮ್ಮ ಹವ್ಯಾಸಿ ನಾಟಕ ತಂಡವು ಆಸಕ್ತಿವುಳ್ಳ ನವ ನಟರಿಗೆ ತರಬೇತಿ ನೀಡುತ್ತಾ ರಂಗ ಶಾಲೆಯಾಗಿ ಮಾರ್ಪಾಡಾಯಿತು.

ನೀವು ಅಭಿನಯಿಸಿರುವ ನಾಟಕಗಳಲ್ಲಿ ನಿಮ್ಮನ್ನು ಆಕರ್ಷಿಸಿದ ಎರಡು ವ್ಯತಿರಿಕ್ತ ಪಾತ್ರಗಳ ಬಗ್ಗೆ ತಿಳಿಸಿ.


ನಾಟಕಗಳಲ್ಲಿ ಅನೇಕ ಪಾತ್ರಗಳು ಸವಾಲನ್ನು ಒಡ್ಡುವಂತಿರುತ್ತವೆ. ಅಂತಹ ಪಾತ್ರಗಳು ನಟರನ್ನು ಹೆಚ್ಚುವರಿ ಆಕರ್ಷಿಸುತ್ತದೆ. ಅದರಲ್ಲಿ ಶೇಕ್ಸ್ ಪಿಯರ್ ರಚನೆಯ ಹ್ಯಾಮ್ಲೆಟ್, ಮ್ಯಾಕ್ ಬೆತ್ ಪಾತ್ರಗಳು, ಭಾರತದ ಶೈಲಿಯ ನಾಟಕದಲ್ಲಿ ನನ್ನನ್ನು ಹೆಚ್ಚು ಆಕರ್ಷಿಸಿದ ಪಾತ್ರಗಳು : ಆಷಾಡದಲ್ಲಿ ಒಂದು ದಿನ ನಾಟಕದ ವಿಲೋಮ ಪಾತ್ರ, ಊರುಭಂಗ ನಾಟಕದಲ್ಲಿ ದುರ್ಯೋಧನನ ಪಾತ್ರ, ಕರ್ಣಭಾರ ನಾಟಕದಲ್ಲಿ ಕರ್ಣನ ಪಾತ್ರ.


ಅನೇಕ ನಿರ್ದೇಶಕರು ಹಾಗೂ ಹಿರಿಯ ಕಲಾವಿದರೊಂದಿಗೆ ಕಾರ್ಯನಿರ್ವಹಿಸಿದ್ದು, ಅವರಿಂದ ಕಲಿತಂತಹ ಸ್ಪೂರ್ತಿದಾಯಕ ಅನುಭವಗಳನ್ನು ನಮ್ಮೊಡನೆ ಹಂಚಿಕೊಳ್ಳುವಿರಾ?


ಪ್ರತಿಕ್ಷಣವೂ ಹೊಸ ವಿಷಯಗಳನ್ನು ಅನೇಕ ಸನ್ನಿವೇಶಗಳಿಂದ ಕಲಿಯುತ್ತಲೇ ಇರುತ್ತೇವೆ. ಅವುಗಳಲ್ಲಿ ರಂಗ ಬದ್ಧತೆ, ಕಥಾರಚನೆ, ನಾಟಕಗಳ ಮೂಲಕ ತಿಳಿಸಬಹುದಾದ ಸಾಮಾಜಿಕ ಕಳಕಳಿ, ಪ್ರಯೋಗಾತ್ಮಕ ಮನಸ್ಥಿತಿ ಕಮಲ ಮುಂತಾದ ಹಲವಾರು ವಿಚಾರಗಳನ್ನು ತಿಳಿದು ಬೆಳೆಯುತ್ತಿದ್ದೇನೆ.


ರಂಗಭೂಮಿಯ ಮೇಲೆ ಚಲನಚಿತ್ರಗಳು ಮತ್ತು ಮಾಧ್ಯಮಗಳು ಪ್ರಭಾವ ಬೀರಿವೆಯೇ?


ಹೌದು, ಚಲನಚಿತ್ರ ಹಾಗೂ ಮಾಧ್ಯಮಗಳ ಪ್ರಭಾವ ಅಂದಿನಿಂದಲೂ ರಂಗಭೂಮಿಯ ಮೇಲೆ ಇದ್ದರು ರಂಗಭೂಮಿ ಇಂದಿಗೂ ನಶಿಸಿ ಹೋಗಿಲ್ಲ, ಕಾರಣ ರಂಗಭೂಮಿಯಲ್ಲಿ ಪ್ರದರ್ಶಿಸುವ ನೈಜತೆಯು ಪ್ರೇಕ್ಷಕರನ್ನು ಆಕರ್ಷಿಸಿದ ರಂಗಭೂಮಿಯ ನಾಟಕಗಳು ಪ್ರದರ್ಶನಗೊಳ್ಳುತ್ತಲೇ ಇವೆ. ಇಡೀ ಭಾರತದಾದ್ಯಂತ ಹೊಸ ಹೊಸ ತಂಡಗಳು, ರಂಗಶಾಲೆಗಳು ರಚನೆಯಾಗಿ ರಂಗಭೂಮಿಯ ಗುಣಾತ್ಮಕ ಹಾಗೂ ಪರಿಮಾಣಾತ್ಮಕವಾದ ಏಳಿಗೆಗೆ ಕಾರಣೀಭೂತವಾಗಿವೆ. ಚಲನಚಿತ್ರಗಳು ಹಾಗೂ ಮಾಧ್ಯಮಗಳಲ್ಲಿ ಅವಕಾಶಗಳನ್ನು ಪಡೆಯಲು ರಂಗಭೂಮಿ ಒಂದು ವೇದಿಕೆ ಎಂದು ತಿಳಿದು ಯುವಕರು ಆಕರ್ಷಿತರಾಗಿ ಈ ಕ್ಷೇತ್ರದಲ್ಲಿ ಸೇರ್ಪಡೆಯಾಗುತ್ತಿದ್ದಾರೆ.


ಇಂದಿನ ಕಲಾವಿದರು ರಂಗಭೂಮಿಯನ್ನು ತ್ಯಜಿಸಿ ಚಲನಚಿತ್ರಗಳ ಕಡೆಗೆ ಆಕರ್ಷಿತರಾಗಲು ಕಾರಣವೇನು?


ಚಲನಚಿತ್ರಗಳ ಬಣ್ಣಗಳಿಗೆ, ಹಣ ಗಳಿಕೆಗೆ, ಹೆಸರು ಗಳಿಕೆಗೆ ಹಾಗೂ ಜನಪ್ರಿಯತೆಗೆ ಇಂದಿನ ಕಲಾವಿದರು ಚಲನಚಿತ್ರಗಳ ಕಡೆಗೆ ಆಕರ್ಷಿತರಾಗುತ್ತಿದ್ದಾರೆ.


ಒಬ್ಬ ನಟನಿಗೆ ಕಷ್ಟಕರ ಎನಿಸುವುದು ಯಾವಾಗ?


ಒಬ್ಬ ನಟನಿಗೆ ಕಷ್ಟವಾಗುವುದು ತನ್ನ ಅಸ್ತಿತ್ವವನ್ನು ಮರೆತು ನಿರ್ವಹಿಸುವ ಪಾತ್ರದಲ್ಲಿ ಲೀನನಾಗುವುದು. ಜೊತೆಗೆ ಹಳೆಯ ಪಾತ್ರವನ್ನು ಮರೆತು ಹೊಸ ಪಾತ್ರಕ್ಕೆ ತನ್ನನ್ನು ರೂಡಿಸಿಕೊಳ್ಳುವುದು.


ನಿಮಗೆ ತುಂಬಾ ಹೆಮ್ಮೆ ಯಾಗುವ ವಿಷಯ ಹಾಗೂ ತಮಗೆ ದೊರೆತಂತಹ ಪ್ರಶಸ್ತಿಗಳ ಬಗ್ಗೆ ತಿಳಿಸಿ.


ನ್ಯಾಷನಲ್ ಯೂತ್ ಫೆಸ್ಟ್ ನಲ್ಲಿ ಸತತವಾಗಿ ಮೂರು ವರುಷ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತೇನೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಾಟಕೋತ್ಸವಗಳಲ್ಲಿ, ಅಲ್ಲಿನ ಚರ್ಚೆಗಳಲ್ಲಿ ಭಾಗವಹಿಸಿದ್ದು ಹೆಮ್ಮೆಯ ವಿಚಾರವಾಗಿದೆ. ರಂಗಶಂಕರ ನಿರ್ದೇಶಕರ ಕಮ್ಮಟದಲ್ಲಿ ಭಾಗವಹಿಸಿದ್ದು ನನ್ನ ಜೀವನದಲ್ಲಿ ಒಂದು ಪ್ರಮುಖವಾದ ವಿಶೇಷ ಸಂಗತಿಯಾಗಿದೆ.


ನಿಮ್ಮ ಮುಂದಿನ ಕಾರ್ಯ ಯೋಜನೆಗಳು ಏನೇನು?


ಕೆಲವು ನಾಟಕಗಳನ್ನು ನಿರ್ದೇಶನ ಮಾಡಲಾಗಿದ್ದು, ಕೋವಿಡ್ 19 ಜನಸಮೂಹ ಒಂದೆಡೆ ಸೇರಲು ಆಗದ ಕಾರಣ ಯಾವುದೇ ನಾಟಕಗಳು ಪ್ರದರ್ಶನಗೊಳ್ಳುತ್ತಿಲ್ಲ. ಇದಲ್ಲದೆ ಬಿ. ಸುರೇಶ್ ರವರ ಅಡುಗೆ ಮನೆಯಲ್ಲಿ ಒಂದು ಹುಲಿ ಎಂಬ ನಾಟಕವನ್ನು ನಿರ್ದೇಶನ ಮಾಡಬೇಕಾಗಿದೆ. ಕರ್ನಾಟಕದಲ್ಲಿ ಹಲವಾರು ಕಾರ್ಯಗಾರಗಳನ್ನು ಮಾಡುವ ಯೋಜನೆ ಇದೆ. ಮುಂದೆಯೂ ಶಿಸ್ತು, ಕಾರ್ಯ ಬದ್ಧತೆ, ಧನಾತ್ಮಕ ಚಿಂತನೆಯೊಂದಿಗೆ ರಂಗಭೂಮಿಯ ಬೆಳವಣಿಗೆ ಕಡೆಗೆ ಶ್ರಮಿಸುತ್ತೇನೆ.ಈ ಸಂಭಾಷಣೆಯಲ್ಲಿ ಮೆಘ ಸಮೀರರ ಬೆಂಬಲ ಮತ್ತು ಸಹಕಾರ ಶ್ಲಾಘನೀಯ. ಹಾಗು ಈ ಅದ್ಭುತ ಸಂದರ್ಶನಕ್ಕಾಗಿ ಅವರ ಕಾರ್ಯನಿರತ ವೇಳಾಪಟ್ಟಿಯ ಮಧ್ಯೆ, ಸಮಯ ಕಳೆದಿದ್ದಕ್ಕಾಗಿ, ನಾನು ಸುಭಾಷ್ ಹೆಬ್ಬಾರ,ಸಂದರ್ಶಕ ಮತ್ತು ಚಿನ್ಮಯೀ, ಪ್ರತಿಲೇಖಕಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ.426 views1 comment

Recent Posts

See All